ಖಡಕವಾಸ್ಲಾ ಕಟ್ಟೆ	

	ಪುಣೆ ನಗರದ ನೈಋತ್ಯಕ್ಕೆ 17.7 ಕಿಮೀ. (11 ಮೈ.) ದೂರದಲ್ಲಿರುವ ಖಡಕವಾಸ್ಲಾ ಹಳ್ಳಿಯ ಹತ್ತಿರ ಮುಠಾ ನದಿಗೆ ಕಟ್ಟಿದ ಕಟ್ಟೆ. ಉದ್ದ 4,820`, ಎತ್ತರ 167`. ಇದನ್ನು 1879ರಲ್ಲಿ ಕಟ್ಟಲಾಯಿತು. ಇದರಿಂದ ಇಲ್ಲಿ ಒಂದು ದೊಡ್ಡಜಲಾಶಯದ ನಿರ್ಮಾಣವಾಗಿದೆ. ಅಲ್ಲಿಂದ ಎರಡು ಮುಖ್ಯ ಕಾಲುವೆಗಳನ್ನು ತೆಗೆದಿದ್ದಾರೆ. ಮೊದಲನೆಯದು ಹಡಪಸರದಿಂದ ಪಾಟಸ್ ಪರ್ಯಂತ ಮತ್ತು ಎರಡನೆಯದು ಕೋಥರೂಡದಿಂದ ಖಡಕೀ ವರೆಗೆ ಸಾಗುತ್ತವೆ.

	ಖಡಕವಾಸ್ಲಾ ಕಟ್ಟೆಗೆ ಪಶ್ಚಿಮದಲ್ಲಿ ಘಟ್ಟಪ್ರದೇಶದಲ್ಲಿ ಮಳೆ ಹೇರಳವಾಗಿ ಬೀಳುತ್ತದೆ; ಈ ನೀರು ಉಪಯೋಗವಾಗದೆ ಹರಿದುಹೋಗುತ್ತಿದ್ದುದನ್ನು ತಪ್ಪಿಸಿ ಇದನ್ನು ಉಪಯುಕ್ತವಾಗಿ ಬಳಸಿಕೊಳ್ಳುವ ಉದ್ದೇಶದಿಂದಲೂ ಈ ಕಟ್ಟೆಯನ್ನು ಹೆಚ್ಚು ದೃಢಪಡಿಸಲೂ ಕ್ಷೇತ್ರವನ್ನು ವಿಸ್ತಾರಮಾಡಲೂ ಯೋಚಿಸಿ ಪಶ್ಚಿಮ ದಿಕ್ಕಿನಲ್ಲಿರುವ ಅಂಬಿ ನದಿಗೆ ಪಾನಶೇತ್ ಎಂಬಲ್ಲಿ ಒಂದು ಮಣ್ನಿನ ಕಟ್ಟೆಯನ್ನು ನಿರ್ಮಿಸಲಾಗುತ್ತಿತ್ತು. ಆ ಕಟ್ಟೆ ಮುಕ್ತಾಯದ ಘಟ್ಟದಲ್ಲಿದ್ದಾಗ ಬಿದ್ದ ಅತಿಶಯ ಮಳೆಯಿಂದಾಗಿ ಅದು ತೇಲಿಹೋಗಿ, ಪ್ರವಾಹದ ರಭಸದಿಂದಾಗಿ ಖಡಕವಾಸ್ಲಾ ಕಟ್ಟೆಯೂ ಒಡೆದು ಹೋಯಿತು. ಈ ದುರ್ಘಟನೆ 1969ರ ಜುಲೈ 12 ರಂದು ಸಂಭವಿಸಿತು.

	ಇತ್ತೀಚೆಗೆ ಪುನಃ ಪಾನಶೇತ್ ಕಟ್ಟೆಯನ್ನು ಕಟ್ಟಿ ಮುಗಿಸಲಾಗಿದೆಯಲ್ಲದೆ, ಖಡಕವಾಸ್ಲಾ ಕಟ್ಟೆಯ ದುರಸ್ತಿಯೂ ಆಗಿದೆ. ಈ ಕಟ್ಟೆಯ ಒಂದು ಪಕ್ಕದಲ್ಲಿ ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನ ಕೇಂದ್ರವಿದೆ. ಇದು ಈ ಕ್ಷೇತ್ರದಲ್ಲಿ ಏಷ್ಯದಲ್ಲೇ ಅತ್ಯಂತ ದೊಡ್ಡದಾದ ಮತ್ತು ಮಹತ್ತ್ವದ ಸಂಶೋಧನ ಕೇಂದ್ರ. ಕಟ್ಟೆಯ ಇನ್ನೊಂದು ಪಕ್ಕದಲ್ಲಿ ರಾಷ್ಟ್ರೀಯ ರಕ್ಷಣ ಅಕಾಡಮಿ ಎಂಬ ಸೈನಿಕ ಶಿಕ್ಷಣ ಮಹಾವಿದ್ಯಾಲಯವಿದೆ.										 *
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ